ನಿಪ್ಪುರ್
ಪ್ರಾಚೀನ ಮೆಸೊಪೊಟೇಮಿಯದ ಪ್ರಾಚೀನ ನಗರ, ಇರಾಕ್ ದೇಶದ ಆದ್ ದಿವಾನಿಯಾ ಮಹಾಫಜಾದಲ್ಲಿ (ಪ್ರಾಂತ್ಯ), ಬಾಗ್ದಾದ್‍ನಿಂದ ಸುಮಾರು 160 ಕಿಮೀ. ದೂರದಲ್ಲಿ ಇದೆ. ಇದರ ಈಗಿನ ಹೆಸರು ನಿಫರ್ ಅಥವಾ ನುಫಾರ್. ಇದು ರಾಜಧಾನಿಯಾಗಿರದಿದ್ದರೂ ಮೆಸಪೊಟೇಮಿಯದ ಧಾರ್ಮಿಕ ಜೀವನದಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಪೂರ್ವವಂಶದ ಹಾಗೂ ಪಾರ್ಥಿಯನ್ ಆಳ್ವಿಕೆಯ ಕಾಲಗಳಲ್ಲಿ (ಕ್ರಿ.ಪೂ. ಸು. 3000-ಕ್ರಿ.ಶ.226) ಇದು ಆಗಾಗ ಪುನರ್‍ನಿರ್ಮಿತವಾಯಿತು. ಸುಮೇರಿಯನ್ ಪುರಾಣಗಳಲ್ಲಿ ಈ ನಗರ ಎನ್‍ಲಿಲ್ ದೇವತೆಯ ಆವಾಸಸ್ಥಾನವಾಗಿತ್ತು. ಎನ್‍ಲಿಲ್ ಬಿರುಗಾಳಿಯ ದೇವತೆ, ಶಕ್ತಿ ದೇವತೆ. ಎನ್‍ಲಿಲ್ ದೇವತೆಯಿಂದ ಮೊಟ್ಟಮೊದಲು ಮಾನವನ ಸೃಷ್ಟಿಯಾದ್ದು ಇಲ್ಲೇ ಎಂಬುದು ಒಂದು ಕಥೆ.

ಅಮೆರಿಕನ್ ಪುರಾತತ್ವಜ್ಞರು 1889-1900ರಲ್ಲಿ ಇಲ್ಲಿ ಉತ್ಖನನ ನಡೆಸಿದರು. 1948ರಲ್ಲಿ ಈ ಕೆಲಸ ಮುಂದುವರಿಯಿತು. ಎನ್‍ಲಿಲ್ ದೇವತೆಯ ಎ-ಕುರ್ ದೇವಾಲಯ, ಪಾರ್ಥಿಯನ್ ದೇವಾಲಯ ಮತ್ತು ಇತರ ಕಟ್ಟಡಗಳು, ಎರಡನೆಯ ವಂಶದ ಆಳ್ವಿಕೆಯ ಕಾಲದ ಇನನ್ನ ದೇವತೆಯ ಆಲಯ, ಉರ್‍ನ ಅರಸ ಷುಲ್ಗೀ (ಕ್ರಿ,ಪೂ. 2456?- ಕ್ರಿ.ಪೂ. ?2409) ನಿರ್ಮಿಸಿದ ಯುದ್ಧ ಹಾಗೂ ಪ್ರೇಮಗಳ ಇಷ್ತಾರ್ ದೇವತೆಯ ಆಲಯ ಮುಂತಾದವು ಪತ್ತೆಯಾಗಿವೆ.

ಈ ನಗರದ ನೈಋತ್ಯಾರ್ಧದಲ್ಲಿ ವಾಸದ ಮನೆಗಳು ಹಾಗೂ ವ್ಯಾಪಾರ ಮಳಿಗೆಗಳಿದ್ದುವು. ಮುರಷು ವಂಶದ (ಕ್ರಿ.ಪೂ. 445-ಕ್ರಿ.ಪೂ. 403) ವ್ಯಾಪಾರ ಮಳಿಗೆಗೆ ಸಂಬಂಧಿಸಿದ ಕುರುಹುಗಳು ಈ ಭಾಗದಲ್ಲಿ ದೊರೆತಿವೆ.  ಪೂರ್ವಭಾಗವೂ ಜನವಸತಿಯ ಕೇಂದ್ರವಾಗಿತ್ತು.  ಕ್ಯೂನಿಫಾರಂ ಲಿಪಿಗಳ ಅನೇಕ ಫಲಕಗಳು ಇಲ್ಲಿ ಸಿಕ್ಕಿವೆ.  ಉತ್ತರಭಾಗದಲ್ಲಿ ಧಾರ್ಮಿಕ ಕಟ್ಟಡಗಳಿದ್ದವು. ಸುಮೇರಿಯನ್ ದೇವ ಪರಿವಾರದ ಎನ್‍ಲಿಲ್ ಮತ್ತು ಇತರ ದೇವತೆಗಳ ಆಲಯಗಳಿರುವುದು ಈ ಭಾಗದಲ್ಲಿ.

ಆಕಾಡ್‍ನ ದೊರೆ ನಾರಾಮ್‍ಸನ್ (ಕ್ರಿ.ಪೂ. ಸು.2550) ಈ ನಗರದ ಗೋಡೆ ಹಾಗೂ ದೇವಾಲಯಗಳನ್ನು ಪುನರ್‍ನಿರ್ಮಿಸಿದ. ಮೂರನೆಯ ವಂಶದ ಮೊದಲನೆಯ ಅರಸ ಉರ್ ನಾಮ್ಮೂ (ಕ್ರಿ.ಪೂ. 23ನೆಯ ಅಥವಾ 22ನೆಯ ಶತಮಾನ) ಎನ್‍ಲಿಲ್ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ.  ಕ್ರಿ.ಶ. 3ನೆಯ ಶತಮಾನದಿಂದ ಕ್ಷೀಣಿಸುತ್ತ ಬಂದ ಈ ನಗರ 12-13ನೆಯ ಶತಮಾನದ ವೇಳೆಗೆ ಪಾಳು ಬಿತ್ತು.

ಇಲ್ಲಿ ಶಾಸನಗಳಿರುವ ಅನೇಕ ಫಲಕಗಳು ದೊರೆತಿವೆ. ಸುಮೇರಿಯನ್ ಸಾಹಿತ್ಯಿಕ ಧಾರ್ಮಿಕ ಕೃತಿಗಳೂ ಇವುಗಳಲ್ಲಿವೆ.
 (ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ